ಚಿತ್ರ ವಿಮರ್ಶೆ – “ಅರಸಯ್ಯನ ಪ್ರೇಮ ಪ್ರಸಂಗ” ಅರಸಯ್ಯನಿಗೆ ಒಲಿದ ಕುಮಾರಿ ಅರಗಿಣಿ.
ಚಿತ್ರ ವಿಮರ್ಶೆ – ಮಂಜುರಾಜ್ ಸೂರ್ಯ
ಚಿತ್ರ – ಅರಸಯ್ಯನ ಪ್ರೇಮ ಪ್ರಸಂಗ
ನಿರ್ಮಾಪಕರು – ಮೇಘಶ್ರೀ ರಾಜೇಶ್
ನಿರ್ದೇಶನ – JVR ದೀಪು
ಛಾಯಾಗ್ರಹಣ – ಗುರುಪ್ರಸಾದ್ ನರ್ನದ್
ಸಂಗೀತ – ಪ್ರವೀಣ್ B.V. , ಪ್ರದೀಪ್ B.V.
ಕಲಾವಿದರು :- ಮಹಂತೇಶ್, ರಶ್ಮಿ ಆರ್. ಗೌಡ, ಪಿ.ಡಿ. ಸತೀಶ್, ರಘು ರಮಣಕೊಪ್ಪ, ವಿಜಯ್ ಚಂಡೂರ್, ಜಹಂಗೀರ್, ಚಿಲ್ಲರ್ ಮಂಜು, ಸುಜೀತ್ ಸುಪ್ರಭ, ಆನಂದ್ ನೀನಾಸಮ್ ಮುಂತಾದವರು
Rating – 3/5
ಅವನ ಹೆಸರು ಅರಸಯ್ಯ
ಅವನನ್ನ ನೋಡಿದ್ರೆ ಸ್ನಾನ ಮಾಡಿ ಎಷ್ಟು ವರ್ಷ ಆಯ್ತೋ ಅನ್ನಿಸುತ್ತೆ, ಯಾವುದೋ ಬರಗೆಟ್ಟ ಪೊದೆಯೊಳಗೆ ಧೂಳು ಹಿಡಿದಿರೋ ಕರೀ ಮಡಕೆ ಇಟ್ಟಂಗಿದೆ ಅವನ ಮುಖ, ಅಡಿಯಿಂದ ಮುಡಿವರೆಗೂ ಕರಡಿಯನ್ನು ಮೀರಿಸುವ ಸೌಂಧರ್ಯ.
ಊರೂರು ಅಲೆದರು ಅವನಿಗೊಂದು ಹೆಣ್ಣು ಕೊಡುವ ಪುಣ್ಯಾತ್ಮರೇ ಹುಟ್ಟಿಲ್ಲ ಅನ್ನಿಸುತ್ತೆ.
ಈ ಅವತಾರದಲ್ಲೂ ಇವನಿಗೊಂದು ಪ್ರೇಮ ಪ್ರಸಂಗ
ಇವನಿಗೆ ಲವ್ ಅಟ್ ಫಸ್ಟ್ ಸೈಟ್ ಆಗುತ್ತೆ.
ಅವನು ದೇವಸ್ಥಾನದಲ್ಲಿ ಅರ್ಚಕ, ಯಾರಾದರೂ ಸತ್ತರೆ ಇವನೇ ಹಾರ್ಮೋನಿಯಮ್ ಬಾರಿಸುತ್ತಾನೆ. ಜೊತೆಗೊಬ್ಬ ಗೆಳೆಯ, ಅವನೋ ತಿಂಡಿಪೋತ ಯಾವಾಗಲೂ ಬಾಯಲ್ಲಿ ಏನಾದರೂ ತಿನ್ನುತ್ತಿರುತ್ತಾನೆ ಉಸಿರಾಟಕ್ಕಿಂತ ಬಾಯಿ ಆಡುವುದೇ ಜಾಸ್ತಿ. ಅರಸಯ್ಯ ಅವರಪ್ಪ ಅಮ್ಮನಿಗೆ ಒಬ್ಬನೇ ಕರಿ ಸುಂದರ, ಆಕಾರ, ವಿಕಾರ, ರೂಪ ಕುರೂಪ. ಇಂತವನಿಗೂ ಒಂದು ಲವ್ ಆಗುತ್ತೆ.
ಅವಳು ಕುಮಾರಿ, (ರಶ್ಮಿಗೌಡ) ಹೆಸರು ಮತ್ತು ಪ್ರಾಯ ಎರಡರಲ್ಲೂ ಕೂಡ ಇನ್ನೂ ಕುಮಾರಿ. ಹುಟ್ಟಿದ ಊರಲ್ಲೇ ಪೋಸ್ಟ್ ಆಫೀಸಿನಲ್ಲಿ ಕೆಲಸಕ್ಕೆ ಮಾಡುತ್ತಾಳೆ, ಇವಳು ವಿದ್ಯಾವಂತೆ, ಬುದ್ದಿವಂತೆ, ಗುಣವಂತೆ, ರೂಪವಂತೆ.
ಅರಸಯ್ಯ ಅದು ಯಾವ ಗಳಿಗೆಯಲ್ಲಿ ಇವಳನ್ನು ನೋಡುತ್ತಾನೋ ಅವಳ ನೆರಳಿನಂತೆ ಅವಳ ಹಿಂದೆ ವಕ್ಕರಿಸಿಕೊಳ್ಳುತ್ತಾನೆ. ಆದರೆ ಅವಳಿಗೆ ಅವನ ಮುಖ ನೋಡಿದ್ರೆ ಅಸಹ್ಯ, ಅವನ ಅವತಾರ ನೋಡಿ ಸಿಡಿ ಮಿಡಿ ಅನ್ನುತ್ತಾಳೆ.
ಇಷ್ಟೆಲ್ಲಾ ಅವತಾರ ಇರೋ ಅರಸಯ್ಯ ಗುಣದಲ್ಲಿ ಮಾತ್ರ ಅಪರಂಜಿ, ಬೇರೆಯವರ ಕಷ್ಟಕ್ಕೆ ಕೈಯಲ್ಲಿರುವ ಉಂಗುರವನ್ನೇ ಬಿಚ್ಚಿಕೊಡುವಂತ ಧಾರಾಳತನ. ಬೇರೆಯವರಿಗಾಗಿ ಮಿಡಿಯುವ ಮನ, ಕಳ್ಳನಲ್ಲ, ಸುಳ್ಳನಲ್ಲ ಆದರೆ ಸ್ವಲ್ಪ ಕಿವುಡು ಸ್ವಲ್ಪ ಜೋರಾಗಿಯೇ ಹೇಳಬೇಕು.
ರೂಪ ಹೇಗಿದ್ದರೇನು ಮನಸ್ಸು ಚನ್ನಾಗಿದೆ, ಭಾವನೆಗಳು ಚನ್ನಾಗಿದೆ, ನಡೆ, ನುಡಿ ಚನ್ನಾಗಿದೆ ಹಾಗಿದ್ರೆ ಪ್ರೀತಿ ಮಾಡೋಕೆ ಸಾಕಲ್ವ. ಇದು ನಿರ್ದೇಶಕರ ಯೋಚನೆ.
ಕಾಮಿಡಿ ಸೀನ್ ಗಳನ್ನು ನಿರ್ದೇಶಕರ ದೀಪು ಚನ್ನಾಗಿ ಎಣೆದಿದ್ದಾರೆ. ಪ್ರತೀ ಸೀನಲ್ಲೂ ವಿಷಯ ಇದೆ, ಹಾಸ್ಯ ಇದೆ, ತುಂಟಾಟ ಇದೆ, ಅಳು ಇದೆ, ಆತಂಕ ಇದೆ, ಶಾಸ್ತ್ರ, ಸಂಪ್ರದಾಯಗಳಿವೆ.
ಕುಮಾರಿ ಅರಸಯ್ಯನ ಪ್ರೇಮವನ್ನು ಅಂಗೀಕರಿಸುತ್ತಾಳೆ ಆದರೆ ವಿಧಿ ಬೇರೆಯದೇ ಆಟ ಆಡುತ್ತದೆ, ಎರಡೂ ಕುಟುಂಬಗಳು ಒಪ್ಪಿ ಮದುವೆ ಮಾಡಬೇಕು ಎನ್ನುವಷ್ಟರಲ್ಲಿ ಅವಳೊಬ್ಬಳಿಂದ ಎಲ್ಲಾ ಖುಷಿ ಸಂಭ್ರಮ ಮುರಿದು ಬೀಳುತ್ತದೆ, ಅರಸಯ್ಯ ಕುಮಾರಿಯ ಮದುವೆಯಾದರೆ ಅವನೊಬ್ಬನ ಹೆಣ ಬೀಳುತ್ತದೆ, ಅಷ್ಟು ಕಷ್ಟಪಟ್ಟು ತಾನು ಪ್ರೀತಿಸಿದ ಹುಡುಗಿಯ ಪ್ರೀತಿ ಪಡೆಯುವ ಅರಸಯ್ಯನಿಗೆ ಬಂದ ಈ ಅನಿಷ್ಟಗಳು ಏನು ಸಹಜ ಸುಂದರಿ ಕುಮಾರಿ ಕುರೂಪಿಯಾದರೂ ಅರಸಯ್ಯನಿಗೆ ಮನಸೋತು ಒಪ್ಪಿಕೊಂಡ ಪ್ರೀತಿಗೆ ಅಡ್ಡಲಾದ ಆ ದುಷ್ಟ ಹೆಂಗಸು ಯಾರು, ಇವರಿಬ್ಬರ ಪ್ರೀತಿಯ ಮದ್ಯೆ ಅನುಮಾನಾಸ್ಪದವಾಗಿ ಬಂದು ಗೊಂದಲ ಸೃಷ್ಟಿಸುವ ಆ ಡಾಕ್ಟರ್ ಯಾರು.? ಈ ಎಲ್ಕಾ ಗೊಂದಲಗಳಿಗೆ ಚಿತ್ರ ನೋಡಬೇಕಾಗುತ್ತದೆ.
ಸಿನಿಮಾ ನೋಡುವ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಗಿವುದರಲ್ಲಿ ಎರಡು ಮಾತಿಲ್ಲ. ಜೊತೆಗೆ ನಗುವನ್ನು ಮನೆಗೆ ಕೊಂಡೊಯ್ಯಬಹುದು. ಮಹಂತೇಶ್ ಅರಸಯ್ಯನಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ ಜೊತೆಗೆ ಪಾತ್ರದಲ್ಲಿ ಜೀವಿಸಿದ್ದಾರೆ ಎನ್ನಬಹುದು. ಹಾಗೆಯೇ ರಶ್ಮಿ ಗೌಡ ಕೂಡ ಕಮಾರಿ ಪಾತ್ರವನ್ನು ಯಾವುದೇ ಅಡೆ ತಡೆ ಇಲ್ಲದೇ ನಟಿಸಿದ್ದಾರೆ.
ಇದೊಂದು ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಮುಗ್ದ ,ಸರಳ ಪ್ರೇಮಕಥೆ. ಇಲ್ಲಿ ಅಂದ, ಆಕಾರ, ಆಸ್ತಿ ಅಂತಸ್ತುಗಳಿಗಿಂದ ಪ್ರಾಮಾಣಿಕ ಪ್ರೀತಿ ಸಜ್ಜನಿಕೆಯ ಮನಸ್ಸು ಮುಖ್ಯ ಎನ್ನುವುದನ್ನು ಚಿತ್ರ ಸಾಬೀತು ಪಡಿಸುತ್ತದೆ.
ಚಿತ್ತದಲ್ಲಿನ ಎಲ್ಲಾ ಪಾತ್ರಗಳು ಪರಿಪಕ್ವತೆಯ ನಟನೆಯನ್ನು ನೀಡಿವೆ.
ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚನ್ನಾಗಿದೆ. ಪ್ರವೀಣ್, ಪ್ರದೀಪ್ ಇಬ್ಬರು ಈ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.
ಗ್ರಾಮೀಣ ಪರಿಸರವನ್ನು ಛಾಯಾಗ್ರಾಹಕ ಗುರುಪ್ರಸಾದ್ ಚನ್ನಾಗಿ ಚಿತ್ರಿಸಿದ್ದಾರೆ.











