Gangs of UK movie trailer released. ಗ್ಯಾಂಗ್ಸ್ ಆಫ್ ಯುಕೆ ಚಿತ್ರದ ಕ್ರೂರ, ವಿಕೃತ, ರಕ್ತಪಾತದ ಚಿತ್ರಕ್ಕೆ ರಿವೈಸ್ ಕಮಿಟಿಯಲ್ಲಿ ನಾಗಾಭರಣ ಸಾಥ್
ಗ್ಯಾಂಗ್ಸ್ ಆಫ್ ಯುಕೆ ಟ್ರೈಲರ್ ಬಿಡುಗಡೆ ಸಮಯದಲ್ಲಿ ವೇದಿಕೆಯ ಮೇಲೆ ಸೆನ್ಸಾರ್ ಮಂಡಳಿ ನಿರ್ಲಕ್ಷ್ಯ ಮಾಡಿದ್ದಕ್ಕೆ ರವಿ ಶ್ರೀವತ್ಸ ವೇದಿಕೆಯ ಮೇಲೆ ಬೇಸರ ಮಾಡಿಕೊಂಡು ಮಾಧ್ಯಮದವರ ಮುಂದೆ ಅವಲತ್ತುಕೊಂಡರು. ಆದರೆ ಶ್ರೀವತ್ಸ ಬಹಳ ಜಾಣ್ಮೆಯಿಂದ ಮೊದಲೇ ಟ್ರೇಲರ್ ತೋರಿಸಿದ್ದರೆ ಮಾಧ್ಯಮದವರ ಪ್ರೆಶ್ನೆಗಳಿಗೆ ಸಿಕ್ಕಿಕೊಳ್ಳಬೇಕಾಗುತ್ತದೆ ಅಂತ ಮೊದಲೇ ಪ್ರೆಸ್ ಮೀಟ್ ಮುಗಿಸಿ ಕೊನೆಯಲ್ಲಿ ಟ್ರೇಲರ್ ಬಿಡುಗಡೆಗೊಳಿಸಿ ಎಲ್ಲರಿಗೂ ವಿದಾಯ ಹೇಳಿದರು.

ಅದೆಷ್ಟೋ ಜನ ಮಾಧ್ಯಮದವರು ಆ ದೃಶ್ಯಗಳನ್ನು ನೋಡಲಾರದೇ ತಲೆ ತಗ್ಗಿಸಿಕೊಂಡವರು ಉಂಟು, ಇನ್ನು ಕೆಲವರು ಕಣ್ಮುಚ್ಚಿಕೊಂಡವರು ಉಂಟು, ಚಿತ್ರತಂಡಕ್ಕೆ ಶುಭಕೋರಲು ಬಂದ ಕೆಲವರು ಭಯ ಬಿದ್ದದ್ದು ಸುಳ್ಳಲ್ಲ
ಕನ್ನಡ ಚಿತ್ರರಂಗದಲ್ಲಿ ಈ ವರೆಗೆ ಎಂದೂ ಕಾಣದ ಈ ಪರಿ ವೈಲೆನ್ಸ್, ಕ್ರೂರತೆಯ ದೃಶ್ಯಗಳನ್ನು ಯಾರೂ ನೋಡಲಿರಕ್ಕೆ ಸಾಧ್ಯವಿಲ್ಲ ಎನ್ನಬಹುದು.
ಸಿನಿಮಾ ಮನರಂಜನೆಯ ಕ್ಷೇತ್ರ ಎನ್ನುತ್ತಾರೆ, ಅದರಿಂದ ಸಮಾಜಕ್ಕೆಮತ್ತು ಪ್ರೇಕ್ಷಕನಿಗೆ ಮೂದ ನೀಡಬೇಕು, ಒಂದು ಒಳ್ಳೆಯ ಸಂದೇಶವನ್ನು ಅಥವಾ ಮನರಂಜನೆಯನ್ನು ನೀಡಬೇಕೆ ,ಹೊರತು ಈ ರೀತಿಯಾಗಿ ಕ್ರೋದ, ರೋಷಾವೇಷಗಳ, ಆಕ್ರೋಷಬರಿತ ರಕ್ತಪಾತದ ಕ್ರೂರತೆಯ ದೃಶ್ಯಗಳನ್ನು ತೆರೆಯಮೇಲೆ ವೈಭವೀಕರಿಸಬೇಕಿತ್ತೇ…?
ಸಮಾಜದ ಭಾವನಾತ್ಮಕವಾದ ವಿಷಯಗಳ ಬಗ್ಗೆ, ಒಬ್ಬ ಅಪ್ಪನ ಕಾಳಜಿ, ಜವಾಬ್ದಾರಿಯ ಬಗ್ಗೆ ಮಾತಾಡುತ್ತಾ ಕಣ್ಣಲ್ಲಿ ನೀರು ತರಿಸುವ ಭಾವನಾ ಜೀವಿ ರವಿ ಶ್ರೀವತ್ಸ ಇವರೇನಾ..?ಅನ್ನಿಸುವಷ್ಟು ಅನುಮಾನ ಮೂಡುತ್ತದೆ.

ಪ್ರತೀಯೊಬ್ಬ ಬರಹಗಾರ, ನಿರ್ದೇಶಕನಿಗೆ ಸಮಾಜದ ಬಗ್ಗೆ ಕಾಳಜಿ ಇರಬೇಕಾಗುತ್ತದೆ ಅದನ್ನು ರವಿ ಶ್ರೀವತ್ಸ ಮರೆತರ ಗೊತ್ತಿಲ್ಲ. ಎಲ್ಲೋ ನಡೆದ ನೈಜ ಘಟನೆಯನ್ನು ಜನರಿಗೆ ತಮ್ಮ ಸಿನಿಮಾದ ಮೂಲಕ ಹೇಳ ಹೊರಟಿರುವುದು ಸರಿ. ಆದರೆ ಅಷ್ಟೊಂದು ಕ್ರೂರ, ರಕ್ತಪತವನ್ನು ವೈಭವೀಕರಿಸಿ ಜಗತ್ತಿಗೆ ತೋರಿಸುವ ಅನಿವಾರ್ಯತೆ ಏನಿದೆಯೋ ದೇವರೇ ಬಲ್ಲ.
ಸೆನ್ಸರ್ ಮಂಡಳಿಯವರ ಬಗ್ಗೆ ಆರೋಪಗಳನ್ನು ಹೊರೆಸಿದ ರವಿ ಶ್ರೀವತ್ಸ ಒಮ್ಮೆ ತಮ್ಮ ಮನಸ್ಸು, ಹೃದಯ, ಅಂತರಾತ್ಮವನ್ನು ಪ್ರಾಮಾಣಿಕವಾಗಿ ಮುಟ್ಟಿಕೊಂಡು ಶುದ್ಧವಾದ ಮನಸ್ಸಿನಿಂದ ಹೇಳಬೇಕು, ನೀವೋಬ್ಬ ಪ್ರಾಮಾಣಿಕ ಸೆನ್ಸಾರ್ ಅಧಿಕಾರಿಯಾಗಿ ಜವಾಬ್ಧಾರಿಯುತವಾದ ಸ್ಥಾನದಲ್ಲಿ ಕುಳಿತಿದ್ದರೆ ಸಮಾಜಕ್ಕೆ ಇಂಥಹದನ್ನು ಬಿಡುತ್ತಿದ್ದರಾ…..?
ನಾಗಭರಣರ ನೈತಿಕಥೆಗೆ ಏನಾಗಿದೆ
ಹಿರಿಯ ನಿರ್ದೇಶಕ ನಾಗಾಭರಣ ಹಲವಾರು ಜವಾಬ್ಧಾರಿಯುತವಾದ ಚಿತ್ರಗಳನ್ನು ನೀಡಿದವರು, ಆಸ್ಪೋಟದಿಂದ ಹಿಡಿದು ಆಕಸ್ಮಿಕ, ನಾಗಮಂಡಲ, ಜನುಮದ ಜೋಡಿ, ಚಿನ್ನಾರಿಮುತ್ತಾ, ಕಲ್ಲರಳಿ ಹೂವಾಗಿ ಇಂತಹ ಅದ್ಬುತ ಚಿತ್ರಗಳು ಇವತ್ತಿಗೂ ಜನ ಮಾನಸದಲ್ಲಿ ಅಚ್ಚಳಿಯದೇ ಉಳಿದಿರುವ ಅದ್ಬುತ ಕಲಾಕೃತಿಗಳನ್ನು ನೀಡಿದ ನಾಗಾಭರಣರವರು ರಿವೈಸಿಂಗ್ ಕಮಿಟಿಯ ಮುಖ್ಯಸ್ಥರಾಗಿ ಇಂತಹ ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟು ಜೈ ಅಂದಿದ್ದಾರೆಯೇ..? ಅಥವಾ ಅವರ ಗಮನಕ್ಕೆ ಬಂದಿಲ್ಲವೇ….? ಏನಾಗಿದೆ ನಾಗಾಭರಣರವರಿಗೆ ದೇವರೇ ಬಲ್ಲ.
ಯಾವುದೋ ಭಾಷೆಗಳ ಸಿನಿಮಾಗಳಲ್ಲಿ ತೋರಿಸಿದ್ದಾರೆ, ಯಾವುದೋ ವೆಬ್ ಸೀರಿಸ್ ಗಳಲ್ಲಿ ಬಂದಿದೆ, ಯವುದೋ ಊರುಗಳಲ್ಲಿ ನಡೆದಿದೆ ಅಂದ್ರೆ ನಮ್ಮ ಮಕ್ಕಳಿಗೆ ಆ ರಕ್ತದ ಕಮಟು ವಾಸನೆಯ ರುಚಿ ತೋರಿಸಬೇಕೆ..?
ರವಿ ಶ್ರೀವತ್ಸ ರವರೇ ನಾನೊಬ್ಬ ಪತ್ರಕರ್ತನಾಗಿ ಮಾತಾಡುತ್ತಿಲ್ಲ ನಿಮ್ಮ ಭಾವನಾತ್ಮಕ ಬರಹಗಳನ್ನು, ನಿಮ್ಮ ಅಂತರಾಳದ ಜವಾಬ್ಧಾರಿಯ ನುಡಿಗಳನ್ನು ಓದಿ, ಕೇಳಿಸಿಕೊಂಡು ಕಣ್ಣಂಚಿನಲ್ಲಿ ನೀರು ತರಿಸಿಕೊಂಡು ಭಾವುಕನಾಗಿದ್ದ, ನಿಮ್ಮ ಬರಹವನ್ನು ಮೆಚ್ಚಿಕೊಂಡಿದ್ದ ಸಾಮಾನ್ಯ ಮನುಷ್ಯನಾಗಿ ನಾನು ಇಂದು ಬೇಸರ ವ್ಯಕ್ತಪಡಿಸುತಿದ್ದೇನೆ. ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ.
ಹಿರಿಯ ನಟ ವಿಷ್ಣುವರ್ಧನ್ ರವರ ಗರಡಿಯಲ್ಲಿ ಬೆಳೆದು, ಅವರ ಆದರ್ಶಗಳ ಸನಿಹದಲ್ಲಿ ಉಸಿರಾಡಿದ್ದ ನೀವು ಅವರಂತಹ ಹಿರಿಯರೆಲ್ಲಾ ಕಟ್ಟಿ ಬೆಳಸಿದ ಈ ಚಿತ್ರರಂಗದ ಮೇಲೆ ಕಾಳಜಿ ಇರಬೇಕಲ್ಲವೇ…? ನಿಮ್ಮಿಂದ ಒಳ್ಳೆಯದನ್ನು ಬಯಸುವುದು ತಪ್ಪೇ..?
ಸಿನಿಮಾದಲ್ಲಿ ಈ ದೃಶ್ಯಗಳು ಇರಬಹುದು, ಇಲ್ಲದಿರಬಹುದು “A” ಸರ್ಟಿಫಿಕೆಟ್ ಇರೋದ್ರಿಂದ ಮಕ್ಕಳನ್ನು ಚಿತ್ರಮಂದಿರಕ್ಕೆ ಬಿಡದಿರ ಬಹುದು. ಸಿನಿಮಾ ಸೂಪರ್ ಹಿಟ್ ಆಗಬಹುದು, ಅದರಿಂದ ನಿಮಗೆ ಹಣದ ಹೊಳೆಯೇ ಹರಿದು ಬರಬಹುದು ಆದರೆ ಈ ಟ್ರೇಲರ್ ಸಾಮಾಜಿಕ ಜಾಲತಾಣದಲ್ಲಿ (ಯೂ ಟ್ಯೂಬ್) ಬಿಡುಗಡೆ ಗೊಳಿಸಿರುವುದರಿಂದ ಇದು ಎಲ್ಲಾ ಮಕ್ಕಳ ಕಣ್ಣಿಗೆ ಸುಲಭವಾಗಿ ಸಿಗುವುದಿಲ್ಲವೇ, ಅವರ ಮನಸ್ಸಿನ ಮೇಲೆ ಏನು ಪ್ರಭಾವ ಬೀರಬಹುದು ಅಂತ ಯೋಚಿಸಿದ್ದೀರಾ…?

ವೇದಿಕೆಯ ಮೇಲೆ ಹಿರಿಯ ನಿರ್ದೇಶಕ, ಬರಹಗಾರ ಎಮ್. ಎಸ್. ರಮೇಶ್ ರಂತಹವರು, ಬೇರೆಯ ಭಾಷೆಯ ನಿರ್ದೇಶಕರನ್ನೂ ಕಾಯುವಂತ, ಕಾಡುವಂತ, ನಿಬ್ಬೆರಗಾಗಿಸುವಂತ ಚಿತ್ರಗಳನ್ನು ನೀಡಿದಂತ ಹಿರಿಯ ನಟ, ನಿರ್ದೇಶಕ ಉಪೇಂದ್ರರಂತವರು, ಸಮಾಜದ ಶಾಂತಿಗಾಗಿ ಪ್ರಾಮಣಿಕವಾಗಿ ಕರ್ತವ್ಯ ನಿರ್ವಹಿಸಿರುತ್ತಿರುವ ಹಿರಿಯ ವಕೀಲರಾದ ಪ್ರಸನ್ನಕುಮಾರ್ ರವರು, ನಿರ್ಮಾಪಕ ಸಂಘದ ಅಧ್ಯಕ್ಷರಾದ ಬಣಕರ್ ರವರು ಈ ಟ್ರೈಲರ್ ಬಿಡುಗಡೆ ಗೊಳಿಸಿ ತಂಡಕ್ಕೆ ಶುಭಕೋರಿದರು. ಆದರೆ ಯಾರು ಇದರಿಂದ ಶ್ರೀಸಾಮಾನ್ಯನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವ ಜವಾಬ್ಧಾರಿಗಳ ಬಗ್ಗೆ ಮಾತಾಡಲಿಲ್ಲ ಅನ್ನುವುದು ಬೇಸರದ ಸಂಗತಿ, ಎಲ್ಲರೂ ಮುಜುಗರಕ್ಕೆ ಒಳಗಾದರೆ ಗೊತ್ತಿಲ್ಲ..? ಅಥವಾ ಉಪೇಂದ್ರ ಇದನ್ನು ನೋಡಿ ದಿಗ್ರಮೆಗೊಳಗಾದರೇ ಗೊತ್ತಿಲ್ಲ..?

ಒಂದಂತು ನಿಜ ಇಂದು ನಮ್ಮ ಭಾಷೆ, ನೆಲ, ಜಲ, ಸಂಸ್ಕ್ರೃತಿ, ಸಿನಿಮಾ, ಸಮಾಜ ಎಲ್ಲವೂ ಅಳಸಿ ಹೋಗುವ ಆತಂಕದಲ್ಲಿದೆ, ಪರ ಭಾಷಿಗರ ಸುಳಿಯಲ್ಲಿ ಸಿಲುಕಿ ಎಲ್ಲಾ ಮುಗಿದು ಹೋಗುವುದೇ ಎನ್ನುವ ಭಯ, ಕನ್ನಡಿಗರ ಅಳಿವು ಉಳಿವಿನ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ದಯವಿಟ್ಟು ಎಲ್ಲವನ್ನು ಉಳಿಸುವ, ಗೆಲ್ಲಿಸುವ ದಾರಿಯ ಕಡೆಗೆ ಸಮಾಜದ ಜನರನ್ನು ಪ್ರೇಕ್ಷಕರನ್ನು ಕರೆದುಕೊಂಡು ಹೋಗುವ ಜವಾಬ್ಧಾರಿ ನಿಮ್ಮಂತ ಅನೇಕರ ಮೇಲಿದೆ ಎನ್ನುವುದನ್ನು ಮರೆಯಬೇಡಿ.
ಇದು ಕೇವಲ ಸಿನಿಮಾದವರಿಗಷ್ಟೇ ಅಲ್ಲಾ ಮಾಧ್ಯಮಗಳು ಕೂಡ ನಾವು ಜವಾಬ್ಧಾರಿಯ ಹೆಜ್ಜೆ ಇಡಬೇಕಿದೆ. ಬರೀ ಹಣ, ಹೆಸರು ಮಾಡುವುದಷ್ಟೇ ಅಲ್ಲ. ನಾವು ಬದುಕುತ್ತಿರುವ ನಮ್ಮೊಂದಿಗಿರುವ ಸಮಾಜದ ಬಗ್ಗೆ ನಾವೆಲ್ಲರೂ ಯೋಚಿಸಬೇಕಿದೆ.
ಈ ಬರಹ ಯಾರನ್ನು ನೋಯಿಸುವ ಸಲುವಾಗಿ ಬರೆದದ್ದಲ್ಲ ಸಾಮಾಜಿಕ ಕಳಕಳಿಯಿಂದ, ನಮ್ಮಗಳ ಜವಾಬ್ಧಾರಿಯನ್ನರಿತು ಬಂದ ಮಾತುಗಳು.











