Kantara chapter 1 Review ಕಾಂತಾರದ ಈಶ್ವರನ ಹೂದೋಟದಲ್ಲಿ ಮೈ ಝುಮ್ಮೆನ್ನಿಸುವ ರಕ್ತಚರಿತ್ರೆ
ಚಿತ್ರ -ಕಾಂತಾರ ಅದ್ಯಾಯ 1
ವಿಮರ್ಶೆ – ಮಂಜುರಾಜ್ ಸೂರ್ಯ
ಚಿತ್ರ – ಕಾಂತಾರ ಅದ್ಯಾಯ 1
ನಿರ್ಮಾಪಕರು – ವಿಜಯ್ ಕಿರಗಂದೂರ್
ನಿರ್ದೇಶನ – ರಿಷಬ್ ಶೆಟ್ಟಿ
ಛಾಯಾಗ್ರಹಣ – ಅರವಿಂದ್ ಕಶ್ಯಪ್
ಸಂಗೀತ – ಅಜನೀಶ್ ಲೋಕನಾಥ್, ಸಿ.ಆರ್. ಬಾಬಿ
ಕಲಾವಿದರು :- ರಿಷಿಬ್ ಶೆಟ್ಟಿ, ರುಕ್ಮುಣಿ ವಸಂತ್, ಗುಲ್ಷನ್ ದೇವಯ್ಯ, ರಾಕೇಶ್ ಪೂಜಾರಿ, ಜಯರಾಮ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ಅಚ್ಯುತ್ ಕುಮಾರ್ ಮುಂತಾದವರು.
ಕಾಂತಾರದ ಈಶ್ವರನ ಹೂದೋಟದಲ್ಲಿ ಮೈ ಝುಮ್ಮೆನ್ನಿಸುವ ರಕ್ತಚರಿತ್ರೆ
ಈ ಜಾಗದಲ್ಲಿ ನನ್ನಪ್ಪ ಕಾಣೆಯಾಗಿದ್ದು ಎಂತಕ್ಕೆ ಅಂತ ಶುರುವಾಗುವ ಕಾಂತಾರದ ಮೊದಲನೇ ಅಧ್ಯಾಯ ಮತ್ತದೇ ಜಾಗದಲ್ಲಿ ಎರಡನೇ ಅಧ್ಯಾಯ ಬರಲಿದೆ ಎನ್ನುವ ಮುನ್ಸೂಚನೆಯೊಂದಿಗೆ ಚಿತ್ರ ಮುಗಿಯುತ್ತದೆ.
ಕಾಂತಾರದ ಕಾಡಿನಲ್ಲಿ ಶಿವ ಗಣಗಳು (ದೈವಗಳು) ನೆಲೆಸಿರುವ ಜಾಗ, “ಈಶ್ವರನ ಹೂದೋಟ” ಇದೊಂದು ಸುಂದರ ಮತ್ತು ಸೌಂಧರ್ಯ ಎರಡನ್ನು ಹೊಂದಿರುವ ವಿಸ್ಮಯ ಲೋಕ.

ಈ ಈಶ್ವರನ ಹೂದೋಟವನ್ನು ವಶ ಪಡಿಸಿಕೊಳ್ಳುವ ದುರಾಸೆಯಿಂದಾಗಿ ಬಾಂಗ್ರಾದ ಸಾಮಂತರಾಜ ಆಕ್ರಮಣ ಮಾಡುತ್ತಾನೆ ಅದರ ಬೆನ್ನಲ್ಲೇ ಧೈವ ಅವನನ್ನು ಅವನ ಪಡೆಯನ್ನು ಬರ್ಬರವಾಗಿ ನಾಶಪಡಿಸಿ ಈಶ್ವರನ ಹೂದೋಟವನ್ನು ಕಾಪಾಡುತ್ತದೆ. ಅಂದಿನಿಂದ ಆ ಕಾಡಿನಲ್ಲಿ ಬ್ರಹ್ಮರಾಕ್ಷಸ ಇದ್ದಾನೆ ಎಂಬ ನಂಬಿಕೆಯಿಂದ ಯಾರು ಕಾಂತಾರದ ಕಾಡಿನ ಕಡೆ ತಿರುಗಿಯೂ ಕೂಡ ನೋಡುವುದಿಲ್ಲ.
ಇದು ಕದಂಬರ ಕಾಲದ ಹಾಗೂ ಪೋರ್ಚುಗೀಸರು ಭಾರತಕ್ಕೆ ಸಾಂಬಾರು ಪದಾರ್ಥಗಳ ಅಮದಿಗಾಗಿ ಬಂತಹ ಕಾಲಘಟ್ಟದ ಕಥೆ.
ಕದಂಬರ ಸಾಮಂತ ರಾಜ ಅವನೊಬ್ಬ ನರ ರೂಪದ ರಾಕ್ಷಸ. ಅವನ ಮುಂದಿನ ತಲೆಮಾರಿಗೂ ಕೂಡ ಅದೇ ಚಾಳಿ. ಕಾಡಿನ ಅಮಾಯಕರನ್ನು ಸೆರೆ ಹಿಡಿದು ಜೀತಕ್ಕೆ ಇಟ್ಟುಕೊಳ್ಳುವುದು, ಹಾಗೂ ವಿದೇಶಿಯರಿಗೆ ಮಾರುವುದು. ಇದು ಇವರ ದುರಾಡಳಿತಕ್ಕೆ ಸಾಕ್ಷಿ.

ಅದೊಂದು ಮಗು ಭೂಗರ್ಭದ ಬಾವಿಯಲ್ಲಿ ಹುಲಿಯ ರಕ್ಷಣೆಯಲ್ಲಿ ಸಿಗುತ್ತದೆ. ಆ ಮಗು ಮುಂದಿನ ಕಾಂತಾರದ ಕಾವಲುಗಾರ ಅವನ ಹೆಸರು ಭರ್ಮೆ (ರಿಷಬ್ ಶೆಟ್ಟಿ). ರಿಷಬ್ ಶೆಟ್ಟಿಯ ಹಿಂದಿನ ಸಿನಿಮಾಗಳನ್ನು ನೋಡಿಕೊಂಡು ಬಂದವರಿಗೆ ತಿಳಿಯುತ್ತದೆ ಕಾಂತಾರದಿಂದ ಅವರಲ್ಲಾಗಿರುವ ಬದಲಾವಣೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ದೈವದ ಆವಾಹನೆಯಾಗುವ ದೃಶ್ಯಗಳಲ್ಲಂತು ಮೈ ಝುಮ್ಮೆನ್ನಿಸುವ, ಹುಬ್ಬೇರಿಸಿ ನಿಬ್ಬೆರಗಾಗುವಂತೆ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಈ ಪಾತ್ರಕ್ಕೆ ರಿಷಬ್ ಬಿಟ್ಟರೆ ಇನ್ಯಾವ ನಟನಿಂದಲೂ ಆ ಪಾತ್ರವನ್ನು ನಿಭಾಯಿಸುವ ತಾಕತ್ತು ಮತ್ಯಾರಿಗೂ ಸಾಧ್ಯವಿಲ್ಲ ಅನ್ನಿಸುತ್ತದೆ.
ರಿಷಬ್ ಮೂರು ವರ್ಷ ಪಟ್ಟ ಕಷ್ಟಕ್ಕೆ ದೈವ ಒಳ್ಳೆಯ ಆಶೀರ್ವಾದ ಮಾಡಿದೆ ಎನ್ನಬಹುದು.

ಸಿನಿಮಾ ಸೆಕೆಂಡ್ ಆಫ್ ಅಂತು ಪ್ರೇಕ್ಷಕರನ್ನು ಸೀಟಿನ ತುದಿಗೆ ಕೂರಿಸುತ್ತದೆ.
ಕಾಂತಾರ ಅಧ್ಯಾಯ 1ಕ್ಕೆ ಇದ್ದ ದುಪ್ಪಟ್ಟು ನಿರೀಕ್ಷೆಯನ್ನು ಹುಸಿಗೊಳಿಸಿಲ್ಲ. ಮತ್ತಷ್ಟು ಅಚ್ಚರಿ, ಕುತೂಹಲ, ಮೆಚ್ಚುಗೆಯನ್ನು ಮೂಡಿಸುತ್ತದೆ.
ಇಲ್ಲಿ ಕೇವಲ ದೈವ ಅಷ್ಟೇ ಅಲ್ಲ ಇದು ಶತಮಾನಗಳ ಹಳೆಯ ವಿಷಯವನ್ನು, ಅಂದಿನ ಜನ ಜೀವನದ ಬದುಕಿನ ಬವಣೆಯನ್ನು ರಿಷಬ್ ತಂಡ ಚನ್ನಾಗಿ ಕಟ್ಟಿಕೊಟ್ಟಿದೆ.
ರಿಷಬ್ ನಿರ್ದೇಶಕನಾಗಿ, ನಾಯಕ ನಟನಾಗಿ ಚಿತ್ರವನ್ನು ಚನ್ನಾಗಿ ದೂಗಿಸಿಕೊಂಡು ಹೋಗಿದ್ದಾರೆ. ಇಲ್ಲಿ ಪಂಜುರ್ಲಿ ಜೊತೆಗೆ ಶಿವಗಣಗಳು, ಚಾವುಂಡಿ (ಚಾಮುಂಡಿ ಅಲ್ಲ) ಜೊತೆಗೆ ದುಷ್ಟ ಶಕ್ತಿಗಳು, ರಾಜ ಪರಂಪರೆ, ಸಿಂಹಾಸನ, ಅಧಿಕಾರದ ದಾಹ, ಅಹಂಕಾರ, ಯುದ್ಧ, ಮಾಟ, ಮಂತ್ರ, ರಕ್ತದ ಹೊಳೆಯನ್ನೇ ನೋಡಬಹುದು.

ಇದು ಕದಂಬರ ಕಾಲದಲ್ಲಿ ನಡೆಯುವ ಕಥೆಗೆ ಬೇಕಾದ ಸೆಟ್ ಗಳನ್ನು ಕಾಡಿನಲ್ಲಿ ಹಾಕಿರುವುದು ಚಿತ್ರದ ದುಬಾರಿ ವೆಚ್ಚಕ್ಕೆ ಸಾಕ್ಷಿಯಾಗಿದೆ. ಒಂದೊಂದು ದೃಶ್ಯಗಳು ವೈಭವಕ್ಕೆ ಹಣ ಕರ್ಚಾಗಿದೆ. ಇದನ್ನು ಕನ್ನಡದ ಹೆಮ್ಮೆಯ ಸಂಸ್ಥೆ ಹೊಂಬಾಳೆ ಸಂಸ್ಥೆ ಹಣವನ್ನು ಚಿತ್ತದಲ್ಲಿ ಹರಿಯುವ ನೀರು, ರಕ್ತಕ್ಕಿಂತ ಹೆಚ್ಚು ಹರಿಸಿದ್ದಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಹಣದ ಹೊಳೆಯನ್ನೇ ಹರಿಸಿದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರ್ ತಮ್ಮ ಸಂಸ್ಥೆಯ ಮೂಲಕ ಈ ರೀತಿಯ ಅದ್ದೂರಿ ಚಿತ್ರಗಳನ್ನು ಪ್ರಪಂಚದ ಪ್ರೇಕ್ಷಕರಿಗೆ ನೀಡುವ ನಿಟ್ಟಿನಲ್ಲಿ ಚಿತ್ರ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಸಿನಿಮಾದಲ್ಲಿರುವ ಅನೇಕ ವಿಷಯಗಳನ್ನು ಖುಷಿಯಿಂದ ಬರೆಯಬೇಕೆನಿಸುತ್ತದೆ. ಆದರೆ ಪ್ರೇಕ್ಷಕರಿಗೆ ಕುತೂಹಲವಿರಲಿ ಎಂದು ಹತ್ತು ಹಲವು ಅಚ್ಚರಿಗಳನ್ನು ಬರೆಯಲು ಮನಸ್ಸಾಗುತ್ತಿಲ್ಲ.
ಚಿತ್ರದ ನಾಯಕಿಯಾಗಿ ಹಾಗೂ ಬಾಂಗ್ರಾ ರಾಜ ಮನೆತನದ ಯುವರಾಣಿಯಾಗಿ (ಕನಕವತಿ) ರುಕ್ಮಿಣಿ ವಸಂತ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಈ ರೀತಿಯ ಪಾತ್ರಕ್ಕೆ ರುಕ್ಮಿಣಿ ಚನ್ನಾಗಿ ಹೊಂದಿಕೊಂಡಿದ್ದಾರೆ.
ರುಕ್ಮಿಣಿ ವಸಂತ್ ಸೌಂಧರ್ಯವನ್ನು ಈ ಚಿತ್ರದಲ್ಲಿ ಮತ್ತಷ್ಟು ಇಮ್ಮಡಿಗೊಳಿಸಿದ್ದಾರೆ.
ರುಕ್ಮಿಣಿ ವಸಂತ್ ಸಿನಿಮಾ ಪಯಣದಲ್ಲಿ ಈ ಚಿತ್ರ ಮತ್ತು ಪಾತ್ರ ಮೈಲಿಗಲ್ಲಾಗಲಿದೆ ಎನ್ನಬಹುದು.
ಕನ್ನಡ ಚಿತ್ರರಂಗದ ಕೀರ್ತಿಯ ಇತಿಹಾಸಕ್ಕೆ ಮತ್ತೊಂದು ಗರಿ ಮೂಡುವುದರಲ್ಲಿ ಯಾವುದೇ ಸಂಶಯಗಳಿಲ್ಲ.
ಎದೆ ಝಲ್ಲೆನ್ನಿಸುವ ದೃಶ್ಯಕಾವ್ಯ ಕಣ್ಣಿಗೆ ಹಬ್ಬ, ಮನಸ್ಸಿಗೆ ಕೌತುಕ, ಹಲವು ಭಾವನೆಗಳನ್ನು ಏಕ ಕಾಲಕ್ಕೆ ಎದೆಯಾಳದಲ್ಲಿ ತುಂಬುವಂತ ಶಕ್ತಿ ಚಿತ್ರಕ್ಕಿದೆ. ಒಂದು ಚಿತ್ರದ ಯಶಸ್ಸಿಗೆ ಅದಕ್ಕಿಂತ ಇನ್ನೇನು ಬೇಕಲ್ಲವೇ.

ಒಂದು ಸಿನಿಮಾ ಕೇವಲ ಮನರಂಜನೆ ಅಷ್ಟೇ ಅಲ್ಲ ನಮ್ಮ ಬದುಕಿನ ಸುತ್ತಾ ಇರುವಂತ ಹಲವು ಬಗೆಯ ಆಚಾರ, ವಿಚಾರಗಳನ್ನು, ಕೆಲವಾರು ಸಂಸ್ಕೃತಿಯ ನೆಲೆಗಟ್ಟನ್ನು ವಿಶ್ವಕ್ಕೆ ಪಸರಿಸುವ ಕೆಲಸ ಒಂದು ಸಿನಿಮಾ ಮಾಡುತ್ತದೆ ಎಂದರೆ ದೃಶ್ಯ ಮಾಧ್ಯಮಕ್ಕೆ ಅದೆಷ್ಟು ಶಕ್ತಿ ಇದೆ ಎನ್ನುವುದನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.
ಕಾಂತಾರ ಒಂದನೇ ಅದ್ಯಾಯ ಭಾರತೀಯ ಚಿತ್ರರಂಗದಲ್ಲಿ ಒಂದು ಸಂಚಲನವನ್ನು ಸೃಷ್ಠಿಸಿದೆ.
ಚಿತ್ರದ ಅದ್ದೂರಿ ಮೇಕಿಂಗ್, ಕಲಾವಿದರ, ತಂತ್ರಗಾರರ ಶ್ರಮ ಚಿತ್ರದಲ್ಲಿ ಎದ್ದು ಕಾಣುತ್ತದೆ.
ಅಷ್ಟೇ ಅಲ್ಲದೇ ಹೊರ ದೇಶಗಳ ಟೆಕ್ನಿಷಿಯನ್ ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.
ಇದು ಐತಿಹಾಸಿಕ ವಿಷಯಗಳನ್ನು ಹೊಳಗೊಂಡಿರುವುದನ್ನು ನೋಡಬಹುದು.
ಸಿನಿಮಾ ಚಿತ್ರಕರಿಸಿರುವ ಪರಿಸರ, ಮತ್ತು ಸೆಟ್ ಗಳು ನಿಜಕ್ಕೂ ಅದ್ಬುತವಾಗಿದೆ.
ಚಿತ್ರದ ಕಲಾವಿದರ ವೇಷ ಭೂಷಣಗಳ ವಿನ್ಯಾಸವನ್ನು ಪ್ರಗತಿ ಶೆಟ್ಟಿ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಹಾಗೂ ಅಜನೀಶ್ ಲೋಕನಾಥ್ ಸಂಗೀತ ಚಿತ್ರದ ಮೆರಗನ್ನು, ಸೊಬಗನ್ನು ಮತ್ತಷ್ಟು ಶ್ರೀಮಂತಗಿಳಿಸಿದೆ. ಆದರೆ ಮೊದಲ ಕಾಂತಾರದಂತೆ ಸದಾ ಗುನುಗುವ ಸುಮಧುರವಾದ ಹಾಡಿನ ಕೊರತೆ ಕಾಣುತ್ತದೆ.
ಅರವಿಂದ್ ಕಷ್ಯಪ್ ಛಾಯಗ್ರಹಣವಂತು ಪ್ರತೀಯೊಂದು ದೃಶ್ಯಗಳು ರೋಮಾಂಚಕವಾದ ದೃಶ್ಯಕಾವ್ಯವಾಗಿ ಮೂಡಿಬಂದಿದೆ.
ಮತ್ತೊಂದು ಸಿನಿಮಾ ಈ ವರ್ಷ ಕನ್ನಡದ ಸಿನಿಮಾ ಜಗತ್ತಿನ ಶಕ್ತಿಯನ್ನು ಹೊರಗೆಡಗಲಿದೆ.
ಒಟ್ಟಿನಲ್ಲಿ ಕಾಂತಾರದ ಮತ್ತಷ್ಟು ಆಧ್ಯಾಯಗಳಿಗೆ ಈ ಚಿತ್ರ ಸ್ಪೂರ್ತಿಯಾಗಲಿದೆ.











