ನಟ ಉಮೇಶ್ ರವರು ಆಸ್ಪತ್ರೆಯಲ್ಲಿ ಮಲಗಿ ಎರಡು ದಿನವಾದರೂ ತಿರುಗಿ ನೋಡದ ವಾಣಿಜ್ಯ ಮಂಡಳಿ
ಕನ್ನಡದ ಹಿರಿಯ ನಟ ಉಮೇಶ್ ರವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮನೆಯಲ್ಲಿ ಬಿದ್ದು ಸೊಂಟ ಮುರಿದುಕೊಂಡು ಮಲಗಿದ್ದಾರೆ. ಅವರ ಈ ಇಳಿ ವಯಸ್ಸಿನಲ್ಲಿ ಹೀಗಾಗಬಾರದಿತ್ತು.
ವಿಷಯ ತಿಳಿದ ಕೆಲವು ಬೆರಳೆಣಿಕೆಯಷ್ಟು ಕಲಾವಿದರು, ಪತ್ರಕರ್ತರು, ಉದ್ಯಮದವರು ನೋಡಿ ಬಂದಿದ್ದಾರೆ, ಕೆಲವರು ತಮ್ಮ ಕೈಲಾದ ಸಹಾಯವನ್ನು ಮಾಡಿ ಬಂದಿದ್ದಾರೆ. ಶೃತಿಯವರ ಕುಟುಂಬ, ನಟ ಶರಣ್, ಹಿರಿಯ ನಟಿ ಗಿರಿಜಾ ಲೋಕೇಶ್, ಶ್ರೀನಿವಾಸ್ ಮೂರ್ತಿ, ನವೀನ್ ಕೃಷ್ಣ, ನಿರ್ಮಾಪಕಿ ಲತಾ ಜಯಪ್ರಕಾಶ್ , ಕೆಲವು ಸಿನಿಮಾ ಪತ್ರಕರ್ತರನ್ನು ಹಾಗೂ ಇನ್ನೂ ಕೆಲವರು ಅವರನ್ನು ಬೇಟಿ ಮಾಡಿ ಸಾಂತ್ವಾನ ಹೇಳಿ ಒಂದಷ್ಟು ಹಣ ನೀಡಿ ಬಂದಿದ್ದಾರೆ.

ಹಾಗೇ ಉಮೇಶಣ್ಣ ನೀವು ಬೇಗ ಹುಷಾರಾಗಿ ಬನ್ನಿ ನಿಮಗೆ ಏನು ಆಗುವುದಿಲ್ಲ, ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತೆ ಅಂತ ಸಾಂತ್ವಾನದ ಮಾತುಗಳಾಡಿ ಬಂದಿದ್ದಾರೆ. ಆದರೆ ಸುಮಾರು 75 ವರ್ಷಗಳ ಸುಧೀರ್ಘ ವಾದ ನಟನೆಯೊಂದಿಗೆ ಇಂದಿಗೂ ಕಲಾ ಪ್ರೇಮಿಗಳನ್ನು ರಂಜಿಸುತ್ತಾ, ಕಲಾ ಸೇವೆಯನ್ನು ಮಾಡಿಕೊಂಡು ಬಂದಿರುವ ಈ ಅಜಾತಾ ಶತ್ರು ಉಮೇಶರವರನ್ನು ನೋಡಿ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಧೈರ್ಯದ ಮಾತು ಹೇಳಲು, ಹಾಗೆ ಅವರ ಆಸ್ಪತ್ರೆಯ ಖರ್ಚು ಬರಿಸಲು ಯಾವೊಬ್ಬ ಸ್ಟಾರ್ ನಟರು, ಸಿನಿಮಾ ರಂಗದವರು ಎರಡು ದಿನವಾದರೂ ಇನ್ನೂ ಮನಸ್ಸು ಮಾಡಿಲ್ಲ ಎಂಬುದೇ ಬೇಸರದ ಸಂಗತಿ.

ಉಮೇಶಣ್ಣನವರು ಆಸ್ಪತ್ರೆ ಸೇರಿರುವುದು ಮಾಧ್ಯಮಗಳ ಮೂಲಕ ಇಡೀ ದೇಶಕ್ಕೆ ಗೊತ್ತಾಗಿದೆ. ಪೋಷಕ ಕಲಾವಿದೆ ಶಶಿಕಲ ಅವರು ಎರಡು ದಿನದಿಂದ ಜೊತೆಗಿದ್ದಾರೆ ಖುದ್ದು ಅವರೇ ಕೆಲವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಾಗಲಿ, ಚಲನಚಿತ್ರ ಅಕಾಡೆಮಿಯಾಗಲಿ, ನಿರ್ಮಾಪಕರ ಸಂಘವಾಗಲಿ, ನಿರ್ದೇಶಕರ ಸಂಘವಾಗಲಿ, ಕಲಾವಿದರ ಸಂಘವಾಗಲಿ ಸಿನಿಮಾರಂಗಕ್ಕೆ ಸಂಭಂದಿಸಿದ ಯಾವ ಸಂಘ ಸಂಸ್ಥೆಗಳು ಅವರನ್ನು ನೋಡುವ ನೋಡಿ ಧೈರ್ಯತುಂಬುವ ಕಾರ್ಯ ಮಾಡಿಲ್ಲ.
ಇದೇ ಚಲನ ಚಿತ್ರ ವಾಣಿಜ್ಯ ಮಂಡಳಿಯ ಕೆಲವರು ಚಿತ್ರದುರ್ಗದ ವ್ಯಕ್ತಿಯೊಬ್ಬನ ಕೊಲೆಯಾದಾಗ ಆ ಕೇಸು ಕೋರ್ಟಲ್ಲಿ ಇನ್ನೂ ನಡೆಯುತ್ತಿದೆ. ಆದರೆ ಆತನ ಕುಟುಂಬಕ್ಕೆ 5,00 000 (ಐದು ಲಕ್ಷ )ಹಣವನ್ನು ನೀಡಿ ಪೋಟೋಗಳಿಗೆ ಫೋಸ್ ನೀಡಿದ್ದಾರೆ ಸತ್ತವನು ಸಿನಿಮಾ ಕಲಾವಿದನಲ್ಲ, ನಿರ್ದೇಶಕನಲ್ಲ, ನಿರ್ಮಾಪಕನಲ್ಲ, ಚಿತ್ರರಂಗದ ಟೆಕ್ನೀಷಿಯನ್ ಅಂತು ಅಲ್ವೇ ಅಲ್ಲ

ಆದರೆ ಮೂರು ತಲೆಮಾರಿನ ಕಲಾವಿದರ ಕೊಂಡಿಯಾಗಿ, ಯಾವುದೇ ವಿವಾದಗಳಿಲ್ಲದ, ಸದಾ ಎಲ್ಲರೊಂದಿಗೆ ಹಸನ್ಮುಖಿಯಾಗಿರುವ ನಟ ಮಾಗಡಿ ರಸ್ತೆಯಲ್ಲಿ ಒಂದು ಖಾಸಗಿ ಆಸ್ಪತ್ರೆಯಲ್ಲಿ ಮಲಗಿ ಎರಡು ದಿನವಾಗಿದೆ ಆದರು ಬಂದವರನ್ನು ಖುಷಿಯಾಗಿ ಮಾತಾಡಿಸುತ್ತಾ ತಮಾಷೆ ಮಾಡುತ್ತಾ ನಗಿಸುತ್ತಿದ್ದಾರೆ. ಅವರಿಗೆ ಏನಾಗಿದೆ ಅನ್ನುವ ಅಸಲಿ ಸತ್ಯ ಅವರಿಗೆ ಗೊತ್ತಿಲ್ಲ.
ಅವರಿಗೆ ಈಗ ಹಣ ಮತ್ತು ಒಂದಿಷ್ಟು ಧೈರ್ಯದ ಮಾತುಗಳು ಬೇಕಾಗಿದೆ. ಇನ್ನಾದರು ಸಂಭಂದ ಪಟ್ಟವರು ಗಮನ ಹರಿಸುವ ಪ್ರಯತ್ನ ಮಾಡಲಿ.
ಹಾಗೆ ನಮ್ಮೆಲ್ಲರ ಪ್ರೀತಿಯ ಹಿರಿಯ ಜೀವ ಉಮೇಶಣ್ಣ ಬೇಗ ಗುಣಮುಖವಾಗಿ ಬರಲಿ, ಸರ್ಕಾರ ಅವರ ಕಡೆ ಗಮನ ಹರಿಸಲಿ ಆಸ್ಪತ್ರೆಯ ಖರ್ಚನ್ನು ನಿಭಾಯಿಸಲಿ ಎಂಬುದು ನಮ್ಮದು ಕೂಡ ಮನವಿ.











