ಇತಿಹಾಸದೊಳಗೆ ಗೀತಾ ಮಾಧವರ ಪ್ರೇಮ ಕಥೆ

ಚಿತ್ರ –  ಕಲ್ಟ್
ನಿರ್ಮಾಪಕರು – ಲೋಕಿ
ನಿರ್ದೇಶನ –  ಅನಿಲ್
ಛಾಯಾಗ್ರಹಣ –  ವಾಲಿ
ಸಂಗೀತ – ಅರ್ಜುನ್ ಜನ್ಯ

Rating -3.5/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು :- ಝದ್ ಖಾನ್, ಮಲೈಕಾ, ರಚಿತರಾಮ್, ಅಲೋಕ್, ಕಿಶನ್, ರಂಗಾಯಣ ರಘು, ಅಚ್ಚುತ್ ಕುಮಾರ್  ಮುಂತಾದವರು.

ಪ್ರೀತಿ ಪ್ರೇಮ ಅನ್ನೋದು ಪುಸ್ತಕದ ಬದನೆಕಾಯಿ ಅಂತಾರೆ ಆದರೆ ಇಲ್ಲಿ ಪ್ರೀತಿ ಶುರು ಆಗೋದೆ ಪುಸ್ತಕದಿಂದ, ಕೊನೆಯಾಗೋದು ಪುಸ್ತಕದಿಂದ

ಹೆಣ್ಣಿನ ಪ್ರೀತಿ ಕಳಕೊಂಡೋರು ಎಣ್ಣೆಗೆ ದಾಸರಾಗೋದು ಶತಮಾನಗಳಿಂದ ಹೇಳಿಕೊಂಡು ಬಂದಿದ್ದರೂ, ಎಣ್ಣೆ ಕುಡಿದವರ ಲಿವರ್ ಹಾಳಾದ್ರೂ ಹೆತ್ತವರ ಕರುಳು ಸುಡುತ್ತೆ ಅನ್ನೋದು ಹೊಸ ವಿಷಯ.

ಇಲ್ಲಿ ಪ್ರೀತಿ ಅಮರನಾ.. ಅಥವಾ ಪ್ರಾಮಾಣಿಕವಾಗಿ ಪ್ರೀತಿಸುವವರು ವಿರಳನಾ… ಅನ್ನೋದು ಯಕ್ಷಪ್ರಶ್ನೆ.

ಕೆಲವೇ ವರ್ಷಗಳ ಹಿಂದೆ ಪ್ರೀತಿಗೆ ಒಂದು ಸಾತ್ವಿಕವಾದ, ಭಾವನಾತ್ಮಕವಾದ ನೆಲೆಗಟ್ಟಿತ್ತು. ಅದಕ್ಕೆ ಅದರದ್ದೇ ಆದ ಪ್ರಾಮಾಣಿಕಥೆಯ ಚೌಕಟ್ಟಿನೊಳಗೆ ಅದರ ಅಸ್ತಿತ್ವವಿತ್ತು.
ಪ್ರೀತಿ ಅನ್ನೋದು ಎರಡು ಜೀವಗಳ ನಡುವೆ ಅರಳುವ ಅನುಬಂಧದ ಬಾವನಾತ್ಮಕವಾದ ಪ್ರೇಮ ಪುಷ್ಪದ ಸುಗಂಧ.
ಎರಡು ಮನಸ್ಸುಗಳ ನಡುವೆ ಹೊಸ ಬದುಕನ್ನು ಕಟ್ಟುವ, ಹೊಸ ಸಂಭಂದಗಳನ್ನು ಸೃಷ್ಟಿಸುವ ಅಮೃತ ಕಳಶವಾಗಿತ್ತು.
ಆದರೆ ಇಂದು ಪ್ರೀತಿಯ ಮಜಲುಗಳು ಬದಲಾಗಿವೆ. ಅದಕ್ಕೆ ಕಾಮದ ಕಟುವಾಸನೆಯಿಂದಿಗೆ ಭಾವನೆಗಳಿಗಿಂತ ದೇಹ ದಾಹದ ತೆವಲುಗಳನ್ನು, ಬಯಕೆಗಳನ್ನು ತಣಿಸುವ, ಅಂಗಾಂಗದ ವಾಂಛೆಗಳಿಗೆ ಮಿಡಿದು ಕಣಿದು ಹರಿಯುವುದೇ ಪ್ರೀತಿ ಅಂದುಕೊಂಡಿರುವ ಕೆಲವು ತಲೆ ಮಾಸಿದ, ಬುದ್ದಿ ಬಲಿಯದ, ಯುವಜನತೆಯ ಆತುರತೆಯ ಅಡ್ಡಾದಿಡ್ಡಿ ಬದುಕಿಗೆ ಪ್ರೀತಿ ಸಿಲುಕಿ ಕೈಕಾಲು ಪಕ್ಕೆಲಕಬುಗಳನ್ನು ಮುರಿದುಕೊಂಡು ಮೂಲೆ ಸೇರಿದೆ.


ಇದು ಸಿನಿಮಾ ಹೆಸರು “ಕಲ್ಟ್” ಚಿತ್ರದ ನಾಯಕ ಝಾಹಿದ್ ಖಾನ್ ಎರಡನೇ ಬಾರಿಗೆ ನಾಯಕನಟ ನಾಗಿ ಮಾದವ ಅಲಿಯಾಸ್ ಮ್ಯಾಡಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಕಾಲೇಜ್ ನಲ್ಲೇ ಪ್ರೀತಿಯ ಬಲೆಗೆ ಬೀಳುವ
ಮಾದವ ಮತ್ತು ಗೀತಾಳ ( ಮಲೈಕಾ ) ನಡುವೆ ಕ್ರಷ್ ಆಗಿ ನಂತರ ಅದು ಪ್ರೀತಿಯಾಗಿ ಟಿಸಿಲೊಡೆದು ಚಿಗುರುವಷ್ಟರಲ್ಲಿ ಆತನಿಗೆ ಮಂಗಳೂರಿನ ಕಾಲೇಜಿಗೆ ಸೀಟ್ ಸಿಗುತ್ತದೆ. ಮಾಧವ ಓದಲು ಹೊರಟರೇ ಗೀತಳ ಎದೆಗೆ ಬೆಂಕಿ ಬೀಳುತ್ತದೆ. ತನ್ನ ಪ್ರೇಯಸಿಯನ್ನು ಸಮಾಧಾನ ಮಾಡಿ ಕೈಗೊಂದು ಮೊಬೈಲ್ ಕೊಟ್ಟು ಇನ್ಮೇಲೆ ನನಗೆ ಕಾಲ್ ಮಾಡಿ ಮಾತಾಡು. ನಾನು ನಿನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ, ಕೇವಲ ನಾಲ್ಕು ವರ್ಷ ಅಷ್ಟೇ ಬಂದುಬಿಡುತ್ತೇನೆ ಎಂದು ಸಮಾಧಾನ ಪಡಿಸಿ ಊರಿಂದ ಬಸ್ ಹತ್ತಿ ಹೊರಡುತ್ತಾನೆ. ಆದರೆ ಗೀತಾ ಕಾಲ್ ಮಾಡುವುದು ತುಂಬಾ ಅಪರೂಪವಾಗುತ್ತದೆ ಅವಳು ಏನಾದಳು ಅನ್ನೋದೇ ಕಥೆಯ ಟ್ವಿಷ್ಟ್. ಈ ತರಹದ ಕಥೆಯ ಚಿತ್ರಗಳು ಲೆಕ್ಕಕ್ಕೆ ಸಿಗದಷ್ಟು ಬಂದಿವೆ. ಆದರೆ ನಿರ್ದೇಶಕ ಅನಿಲ್ ಬೇರೆಯದೇ ರೀತಿಯಲ್ಲಿ ಹೇಳಿದ್ದಾರೆ.


ಗೀತಾ ಮತ್ತು ಮಾಧವನ ಮದ್ಯೆ ಇತಿಹಾಸಿನಿ (ರಚಿತಾರಾಮ್) ಯ ಎಂಟ್ರಿಯಾಗುತ್ತದೆ. ಈಗ ಇದು ಟ್ರಯಾಂಗಲ್ ಲವ್ ಸ್ಟೋರಿ ಅನ್ನುವುದರಲ್ಲಿ ಅನುಮಾನವೇ ಬೇಡ.
ಪ್ರಾಣಕ್ಕಿಂತ ಪ್ರೀತಿಸುತಿದ್ದ ಗೀತಾ ಮಾದವನ ಪ್ರಾಣ ಹೋಗುವಷ್ಟು ನೋಯಿಸುತ್ತಾಳೆ, ಅಳಿಸುತ್ತಾಳೆ.
ಕಾರಣ CET ಯಲ್ಲಿ ಲಾಸ್ಟ್ ರೌಂಡ್ ನಲ್ಲಿ ಇಂಜಿನಿಯರಿಂಗ್ ಸೀಟ್ ಗಿಟ್ಡಿಸಿಕೊಂಡ ಗೀತಾ ತಕ್ಷಣವೇ ಲಾಸ್ಟ್ ಬಸ್ ಹಿಡಿದು ಬೆಂಗಳೂರಿನ ಮಾಯಾ ಲೋಕಕ್ಕೆ ಬಂದು ಬಣ್ಣ ಬದಲಿಸೋ ಮಾಯಾಂಗನೆಯಾಗಿ, ಶ್ರೀಮಂತ ಹುಡುಗನ ಮೈ ಚಳಿಗೆ ಬೆತ್ತಲೆಯಾಗಿ ಮೈ ಕಾಯಿಸುತ್ತಿರುತ್ತಾಳೆ, ಅಮಾಯಕ, ಪ್ರಾಮಾಣಿಕ ಪ್ರೇಮಿ ಮಾಧವನಿಗೆ ಇದು ತಿಳಿದು ಎದೆಯಲ್ಲಿ ಯಾರೋ ಗಢಾರಿಯಲ್ಲಿ ಮೆಣಸಿನ ಕಾಯಿ ಕುಟ್ಟಿದಂತಾಗುತ್ತದೆ. ಅವನು ಕಾಡಿ, ಬೇಡಿ ಕಣ್ಣೀರಿಟ್ಟರು ಕರಗದ ಗೀತಾ ಹೊಸ ಸ್ಟಾಕ್ ಕ್ಲಿಯರ್ ಸೇಲ್ ನಂತೆ ಒಂದು ಆಫರ್ ಕೊಡುತ್ತಾಳೆ ನೀನು ನನ್ನ ಲೈಫ್ ನಲ್ಲಿ ಮತ್ತೆ ಬರಲ್ಲ ಅಂದ್ರೆ ಪೂರ್ತಿ ರಾತ್ರಿ ನಿನ್ನ ಜೊತೆ ಮಲಗ್ತೀನಿ ಅನ್ನೋ ಅವಕಾಶ ಕೊಡುತ್ತಾಳೆ.
ಕಪಾಳಕ್ಕೆ ಬಾರಿಸಿ, ಇತ್ತ ಕುಡಿತಕ್ಕೆ ದಾಸನಾದ ಮಾಧವ ಮ್ಯಾಡಿಯಾಗಿ ಬದಲಾಗುತ್ತಾನೆ, ಅದು ಎಷ್ಟರ ಮಟ್ಟುಗೆ ಅಂದ್ರೆ ಪ್ರೇಕ್ಷಕನಿಗೆ ತಲೆ ಕೆಟ್ಟು ಸಿನಿಮಾ ಬಿಟ್ಟ ಕೂಡಲೇ ವೈನ್ ಸ್ಟೋರ್ ಹುಡುಕುವಷ್ಟು ನಿರ್ದೇಶಕರು ನಟ ಝೈದ್ ಖಾನ್ ಎಂಬ ಮಾಧವನಿಗೆ ಕುಡಿಸಿದ್ದಾರೆ.

ಮ್ಯಾಡಿ ಕುಡಿದು ಟೈಟ್ ಆಗುವ ಪಬ್ ನಲ್ಲಿ ಸಿಗುವುದೇ ಮತ್ತೊಂದು ಹುಡುಗಿ ಡಿಂಪಲ್ ಸುಂದರಿ ಇತಿಹಾಸಿನಿ (ರಚಿತಾ ರಾಮ್) ಈಕೆ ಎಷ್ಟರ ಮಟ್ಟಿಗೆ ಕುಡಿಯುತ್ತಾಳೆಂದರೆ ಪಬ್ ನಲ್ಲಿ ಕುಡಿದು ಜ್ಞಾನ ತಪ್ಪಿ ಬೀಳುವಷ್ಟು. ಮ್ಯಾಡಿಯನ್ನು ಮೀರಿಸುವಷ್ಟು, ಸಿಗರೇಟು, ಎಣ್ಣೆ ಈ ಹೆಣ್ಣಿನ ಬೆಸ್ಟ್ ಫ್ರೆಂಡ್.
ALL OK Rapper  ಮ್ಯಾಡಿಯ ಗೆಳೆಯನಾಗಿ ಸಿನಿಮಾ ಪೂರ್ತಿ ಸ್ಕೋರ್ ಮಾಡಿದ್ದಾರೆ.

ಪಬ್ ನಲ್ಲಿ ಹಾಡುಗಳನ್ನು ಹಾಕುವ DJ ಯಾಗಿ ಪಾತ್ರವನ್ನು ಚನ್ನಾಗಿ ನಿಭಾಯಿಸಿದ್ದಾರೆ.
ಅಕಸ್ಮಾತ್ ಆಗಿ ಪಬ್ ನಲ್ಲಿ ಕುಡಿದು ಚಿತ್ತಾಗಿ ಜ್ಞನಾನ ತಪ್ಪಿ ಬಿದ್ದಿದ್ದ ಇತಿಹಾಸಿನಿಯನ್ನು ತಮ್ಮ ಮನೆಗೆ ಕರೆತಂದ ಮ್ಯಾಡಿ, ಮತ್ತು ಆಲ್ ಓಕೆ ಕ್ರಮೇಣ ಸ್ನೇಹಿತರಾಗುತ್ತಾರೆ. ಪ್ರೀತಿಯಿಂದ ನೊಂದು ಸೈಕ್ ಆಗಿದ್ದ ಮಾಧವನನ್ನು ಸರಿ ದಾರಿಗೆ ತಂದು ತಿದ್ದಿ ತೀಡಿ ಮತ್ತೆ ಮನುಷ್ಷನನ್ನಾಗಿ ಮಾಡುತ್ತಾಳೆ ಇವರಿಬ್ಬರ ಮದ್ಯೆ ಪ್ರೀತಿ ಅರಳುತ್ತಿದ್ದಂತೆ ಗೀತಾ ಮತ್ತೆ ವಾಪಸ್ ಬರುತ್ತಾಳೆ. ಈಗ ಮ್ಯಾಡಿ ಆಗಿದ್ದ ಮಾದವ ಗೀತಾಳೊಂದಿಗೆ ಪ್ರಣಯ ಗೀತೆ ಹಾಡುತ್ತಾನಾ..? ಅಥವಾ ಇತಿಹಾಸಿನಿಯ ಪ್ರೀತಿಯೊಳಗೆ ಮುಳುಗಿ ಪ್ರೇಮದ ಇತಿಹಾಸ ಸೇರುತ್ತಾನಾ..? ಅನ್ನೋದೆ ಕಲ್ಟ್ ಚಿತ್ರದ ಕಥೆ.

ಝೈದ್ ಖಾನ್ ಎರಡನೇ ಚಿತ್ರ ಕಲ್ಟ್. ಝೈದ್ ಖಾನ್ ಮೊದಲ ಚಿತ್ರಕ್ಕಿಂತ ಎರಡನೇ ಚಿತ್ರಕ್ಕೆ ಸ್ವಲ್ಪ ಚನ್ನಾಗಿಯೇ ತಯಾರಿ ನಡೆಸಿಕೊಂಡಿದ್ದಾರೆ. ಅಭಿನಯದಲ್ಲೂ ಚೇತರಿಕೆ ಕಾಣಬಹುದು. ಒಬ್ಬ ಪ್ರೇಮಿ ಮಾಧವನಾಗಿ, ಭಗ್ನಪ್ರೇಮಿ ಮ್ಯಾಡಿಯಾಗಿ ಗಮನ ಸೆಳೆದಿದ್ದಾರೆ.
ಪ್ರೇಮಿಯಾಗಿ, ಕುಡುಕನಾಗಿ ಅಲೆಯುವ ಪಾತ್ರಗಳ ಎರೆಡೆರಡು ಶೇಡ್ ಗಳಲ್ಲಿ ಝೈದ್ ಅಭಿನಯಿಸಿದ್ದಾರೆ.
ಮಲೈಕಾ ಕೂಡ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಳ್ಳಿಯಲ್ಲಿ ಕಾಲೇಜ್ ಓದುವ ಹುಡುಗಿಯಾಗಿ, ಬೆಂಗಳೂರಿನ ಶ್ರೀಮಂತ ಹುಡುಗನ ತೆಕ್ಕೆಯಲ್ಲಿ ಮೈ ಮುರಿವ ಹುಡುಗಿಯಾಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಚಿತ್ರದ ಕಥೆಯಲ್ಲಿ ಮತ್ತೊಬ್ಬ ನಾಯಕಿ ರಚಿತಾ ರಾಮ್.
ಇತಿಹಾಸಿನಿಯಾಗಿ ಪ್ರಭುದ್ಧ ಪ್ರೇಮಿಯಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ.
ರಂಗಾಯಣ ರಘು ತಂದೆಯಾಗಿ ಚಿತ್ರದ ಕಥೆಯೊಳಗೆ ಪ್ರಮುಖವಾಗಿದ್ದಾರೆ.
ರಚಿತಾರಾಮ್ ಹಾಗೂ ರಂಗಾಯಣ ರಘು ಇವರಿಬ್ಬರ ಪಾತ್ರ ಚಿತ್ರಕ್ಕೆ ಮತ್ತಷ್ಟು ಶಕ್ತಿಯಾಗಿದೆ. ಅಪ್ಪಾ ಮಗಳ ಸೆಂಟಿಮೆಂಟ್ ದೃಶ್ಯಗಳು ಮನೋಜ್ಞವಾಗಿ ಮೂಡಿ ಬಂದಿದೆ. ಇವರಿಬ್ಬರ ಅಭಿನಯ ಪ್ರೇಕ್ಷಕನ ಕಣ್ಣಂಚನ್ನು ಒದ್ದೆ ಮಾಡುತ್ತದೆ. ಯಾರೋ ಕಿಡಿಗೇಡಿಗಳ ಕಾಮದಾಹಕ್ಕೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಶೀಲ ಮತ್ತು ತಂದೆಯನ್ನು ಕಳೆದುಕೊಂಡು ಮದ್ಯ ವೆಸನಿಯಾಗಿ ಕುಡಿತ, ಸಿಗರೇಟುಗಳಿಗೆ ಶರಣಾಗಿ ಒಂದು ಒಂಟಿ ಹೆಣ್ಣು ಸಮಾಜದಲ್ಲಿ ಏನೆಲ್ಲಾ ಕಷ್ಟ ಪಡಬಹುದು ಎನ್ನುವುದನ್ನು ರಚಿತಾರಾಮ್ ಪಾತ್ರದ ಮೂಲಕ ನಿರ್ದೇಶಕರು ಕ್ರೂರವಾಗಿ ತೋರಿಸಿದ್ದಾರೆ.
ಇತ್ತೀಚೆಗೆ ಕೆಲವು ನಿರ್ದೇಶಕರು ಹೆಣ್ಣಿನ ಬಲತ್ಕಾರವನ್ನೇ ತಮ್ಮ ಕಥೆಯ ಬಂಡವಾಳ ಮಾಡಿಕೊಳ್ಳುತ್ತಿರುವುದು ಸೋಚನೀಯ.
ನಿರ್ದೇಶಕ ಅನೀಲ್ ಕುಮಾರ್ ಕುಡಿತ, ಹೊಡೆದಾಟ, ಹೆಣ್ಣನ್ನು ತೆಗಳುವುದು, ಪ್ರೀತಿಸಿ ಕೈ ಕೊಟ್ಟರೆ ಕುಡಿದು ಸಿಗರೇಟಿನ ಹೊಗೆಯೊಳಗೆ ಬದುಕು ಕಳೆದು ಹೋಗುವುದನ್ನು ಬಹಳವಾಗಿ ಪ್ರಚೋದಿಸಿದ್ದಾರೆ.

ಅರ್ಧ ಘಂಟೆ ಬೇಡದ ದೃಶ್ಯಗಳನ್ನು ಕತ್ತರಿಸಿ ಸಿನಿಮಾದ ಸಮಯವನ್ನು ಕಡಿಮೆ ಮಾಡಿದ್ದರೆ ಚಿತ್ರ ಇನ್ನೂ ಚನ್ನಾಗಿರುತಿತ್ತು. ಆದರೆ ಚಿತ್ರದ ಕ್ಲೈಮ್ಯಾಕ್ಸ್ ಚನ್ನಾಗಿದೆ. ಕಥೆಗೆ ಕಥೆಯ ಅಂತ್ಯಕ್ಕೆ ನ್ಯಾಯ ಒದಗಿಸಿದ್ದಾರೆ.
ಅದ್ದೂರಿಯಾಗಿ ಚಿತ್ರ ನಿರ್ಮಾಣವಾಗಿದೆ. ಇವತ್ತಿನ ಟ್ರೆಂಡ್ ಗೆ ತಕ್ಕಂತೆ ಸಿನಿಮಾ ಮೇಕಿಂಗ್ ಆಗಿದೆ.
ಪ್ರೇಕ್ಷಕ ಕೊಟ್ಟ ಹಣಕ್ಕೆ ಮೋಸವಿಲ್ಲ ಎನ್ನಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor