ನಿದ್ರಾದೇವಿ ನೆಕ್ಷ್ಟ್ ಡೋರ್ ಚಿತ್ರ ವಿಮರ್ಶೆ :- ಅಯ್ಯೋ ಅಯ್ಯಯ್ಯೋ ನಿದ್ರೆ ಬರಂಗಿಲ್ಲ.
ಚಿತ್ರ ವಿಮರ್ಶೆ – ಮಂಜುರಾಜ್ ಸೂರ್ಯ
ಚಿತ್ರ – ನಿದ್ರಾದೇವಿ ನೆಕ್ಸ್ಟ್ ಡೂರ್
ನಿರ್ಮಾಪಕರು – ಜಯರಾಮ್ ದೇವ ಸಮುದ್ರ
ನಿರ್ದೇಶನ – ಸುರಾಗ್ ಸಾಗರ
ಛಾಯಾಗ್ರಹಣ – ಅಜಯ್ ವಿ. ಕುಲಕರ್ಣಿ
ಸಂಗೀತ – ನಕುಲ್ ಅಭಯಂಕರ್
Rating – 3/5
ಕಲಾವಿದರು – ಪ್ರವೀರ್ ಶೆಟ್ಟಿ, ಶೈನ್ ಶೆಟ್ಟಿ, ರಿಷಿಕಾ ನಾಯ್ಕ, ಸುಧಾರಾಣಿ, ಶೃತಿ ಹರಿಹರನ್,
ನಿದ್ರಾದೇವಿ ನೆಕ್ಷ್ಟ್ ಡೋರ್
ಒಂದು ವಿಭಿನ್ನ ಪ್ರಯೋಗ: ಮನಸ್ಸಿನ ಕನ್ನಡಿ ‘ನಿದ್ರಾದೇವಿ ನೆಕ್ಸ್ಟ್ ಡೋರ್’
ಚಿತ್ರೋದ್ಯಮದಲ್ಲಿ ನಿರಂತರವಾಗಿ ಒಂದೇ ರೀತಿಯ ಕಥೆಗಳು ಬರುತ್ತಿರುವಾಗ, ‘ನಿದ್ರಾದೇವಿ ನೆಕ್ಸ್ಟ್ ಡೋರ್’ ಚಿತ್ರವು ಒಂದು ವಿಭಿನ್ನ ಅನುಭವದೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಇದು ಕೇವಲ ಒಂದು ಸಿನಿಮಾ ಅಲ್ಲ, ಬದಲಾಗಿ ಮಾನವ ಮನಸ್ಸಿನ ಆಳವಾದ ಒಳನೋಟ ಮತ್ತು ಭ್ರಮೆಗಳ ಜಗತ್ತನ್ನು ಅನಾವರಣಗೊಳಿಸುವ ಸೂಕ್ಷ್ಮ ಪ್ರಯೋಗ.
ಚಿಕ್ಕವನಿದ್ದಾಗಲೇ ನಾಯಕನಿಗೆ ಅವನ ಸ್ನೇಹಿತನೊಬ್ಬ “ನೀನು ಯಾರನ್ನು ಇಷ್ಟಪಡುತ್ತೀಯೋ, ಅವರೆಲ್ಲರೂ ನಿನ್ನನ್ನು ಬಿಟ್ಟು ಹೋಗುತ್ತಾರೆ” ಎಂದು ಹೇಳಿದ ಮಾತು ಆತನ ಮನಸ್ಸಿನಲ್ಲಿ ಆಳವಾಗಿ ಬೇರು ಬಿಡುತ್ತದೆ. ದುರದೃಷ್ಟವಶಾತ್, ಆ ಮಾತು ನಿಜವಾಗುತ್ತಾ ಹೋಗುತ್ತದೆ. ಅವನು ಪ್ರೀತಿಸಿದ ನಾಯಿ, ಅವನ ಬದುಕಿನ ಆಸರೆಯಾಗಿದ್ದ ಅಮ್ಮ, ಮತ್ತು ಅವನ ಮೊದಲ ಪ್ರೀತಿಯ ಹುಡುಗಿ ಒಬ್ಬರಾದ ಮೇಲೆ ಒಬ್ಬರು ಅವನನ್ನು ಅಗಲಿ ದೂರವಾಗುತ್ತಾರೆ.

ಇದರಿಂದ ಆಘಾತಕ್ಕೊಳಗಾದ ನಾಯಕ, ತಾನು ಪ್ರೀತಿಸಿದವರೆಲ್ಲಾ ಸಾಯುತ್ತಾರೆ ಎಂಬ ಭ್ರಮೆಯಲ್ಲೇ ಬದುಕಲು ಪ್ರಾರಂಭಿಸುತ್ತಾನೆ.
ಆ ಒಂದು ಖಿನ್ನತೆಯಲ್ಲಿ ಬಳಲುವ ಅವನಿಗೆ ರಾತ್ರಿ ನಿದ್ದೆ ಬರುವುದಿಲ್ಲ, ಚಿತ್ರದಲ್ಲಿ ನಾನಾ ರೀತಿಯ ಖಿನ್ನತೆಯಿಂದ ಬಳಲುತ್ತಾ ಭ್ರಮೆಗೆ ಒಳಗಾಗಿ ಮಾನಸಿಕವಾಗಿ ಹುಚ್ಚರಂತಾಡುವ ವ್ಯಕ್ತಿಗಳಗೆ ಅವರ ಮನಸ್ಸಿಗೆ ಸಮಾಧಾನ ಪಡಿಸಲು, ಹಾಗೂ ರಾತ್ರಿ ನಿದ್ದೆಬಾರದ ಜನರನ್ನು ಒಂದು ಕಡೆ ಸೇರಿಸಿ ಅವರಿಗೆ ಮಧುರ ಮಾತುಗಳ ಮೂಲಕ ಸಮಾಧಾನ ಗೊಳಿಸುವುದು, ಹಾಗೂ ಯಾರಿಗಾದರೂ ಹೊಡಿಯಬೇಕು ಅನ್ನಿಸಿದರೆ ಹೊಡೆಸಿ ಸಮಾಧಾನ ಪಡಿಸುವ ಒಂದು ಹೊಸ ಬಿಸಿನೆಸ್ ಅನ್ನು ನಿರ್ದೇಶಕ ಸುರಾಗ್ ಸಾಗರ ಪರಿಚಯಿಸಿದ್ದಾರೆ.
ಈ ಸಂಸ್ಥೆಯನ್ನು ನಡೆಸುವವನು ಕಥೆಯ ಖಳನಟ ಶೈನ್ ಶೆಟ್ಟಿ.
ಈ ಖಾಯಿಲೆಯಿಂದ ಬಳಲುವ ನಾಯಕ ನಟ ಪ್ರವೀರ್ ಶೆಟ್ಟಿಯನ್ನು
ಮನಃಶಾಸ್ತ್ರಜ್ಞೆ (ಶ್ರುತಿ ಹರಿಹರನ್) ಗುಣಪಡಿಸಲು ಎಷ್ಟೇ ಪ್ರಯತ್ನಿಸಿದರೂ ವಿಫಲರಾಗುತ್ತಾರೆ.
ಸಮಸ್ಯೆ ಇಷ್ಟಕ್ಕೆ ನಿಲ್ಲುವುದಿಲ್ಲ. ಆಗ ನಾಯಕನ ಬದುಕಿಗೆ ಬಂದ ಹೊಸ ಗೆಳತಿ, ರಿಧಿಮಾ (ರಿಷಿಕಾ ನಾಯ್ಕ) ಅವಳು ಮನೋ ವೈದ್ಯೆಯಾಗಿ ಅವನ ಮನಸ್ಸಿನ ಗಾಯಕ್ಕೆ ಮದ್ದಾಗಿ ಆತನ ಬಾಲ್ಯದ ಕಹಿ ಘಟನೆಗಳನ್ನು ಮರೆಸಲು ಪ್ರಯತ್ನಿಸುತ್ತಾಳೆ. ಅವಳ ಮಡಿಲಲ್ಲಿ ಮಲಗಿಸಿ ನೋವನ್ನು ಮರೆಸುತ್ತಾಳೆ, ಆದರೆ ಅವನಿಗೆ ಅವಳಿಂದಲೂ ದೂರಾಗುವ ಭಯ ಅವನನ್ನು ಕಾಡುತ್ತದೆ. ಆ ಭಯದಿಂದಲೇ ಮತ್ತಷ್ಟು ಎಡವಟ್ಟುಗಳನ್ನು ಮಾಡಿಕೊಳ್ಳುತ್ತಾನೆ.
ಇವನ ಬಾಲ್ಯದ ಗೆಳೆಯ ಬೇರೆ ಹೆಸರಿನಿಂದ ಇವನ ನಡುವೆಯೇ ಇರುತ್ತಾನೆ ಆದರೆ ಅವನ್ಯಾರು..?
ನಾಯಕ ಈ ಖಾಯಿಲೆಯಿಂದ ಹೊರ ಬರುತ್ತಾನಾ..?
ಅವನು ಪ್ರೀತಿಸುವ ಹುಡುಗಿಯನ್ನು ಉಳಿಸಿಕೊಳ್ಳುತ್ತಾನಾ..? ಎನ್ನುವುದೇ “ನಿದ್ರಾದೇವಿ ನೆಕ್ಷ್ಟ್ ಡೋರ್” ಚಿತ್ರ.
ನಿರ್ದೇಶಕ ಸುರಾಗ್ ಸಾಗರ ಚಿತ್ರ ಕಥೆಯನ್ನು ವಿಭಿನ್ನವಾಗಿ ಬರೆದಿದ್ದಾರೆ.

ಆದರೆ ಪ್ರೇಕ್ಷಕ ಗೊಂದಲಕ್ಕೆ ಬೀಳುತ್ತಾನೆ. ಇದು ಹೊಸತನದ ಕಥೆಯಾದರೂ ಅರಗಿಸಿಕೊಳ್ಳುವುದು ಕಷ್ಟ ಎನ್ನಿಸುತ್ತದೆ.
ಬಾಲ್ಯದಲ್ಲಿ ಸುಳ್ಳು ಹೇಳಿ ಮನಸ್ಸನ್ನು ಹಾಳು ಮಾಡಿದವನು ಎದುರು ಬಂದು ನಾನು ಹೇಳಿದ್ದು ಸುಳ್ಳು ಎಂದು ಹೇಳುತ್ತಾನೆ. ಅವನು ಬಾಲ್ಯದಲ್ಲಿ ಕಥಾ ನಾಯಕನಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಹಲ್ಲೆ ಮಾಡಿರುತ್ತಾನೆ. ಅವನಿಂದಲೇ ಅವನು ಗುಣಮುಖನಾಗ ಬಹುದೆಂಬ ಆಶಾಕಿರಣ ಮೂಡುತ್ತದೆ. ಆ ಸ್ನೇಹಿತ ಕ್ಷಮೆ ಯಾಚಿಸಿ, ತಾನು ಆಡಿದ ಮಾತು ಸುಳ್ಳು ಎಂದು ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಾನೆ. ಹಾಗಾದರೆ, ಕೇವಲ ಒಂದು ಕ್ಷಮೆಯು ನಾಯಕನ ಮನಸ್ಸಿನ ಗೊಂದಲವನ್ನು ಪರಿಹರಿಸುತ್ತದೆಯೇ? ಅಥವಾ ಆತ ತನ್ನ ಭ್ರಮೆಯಲ್ಲೇ ಜೀವ ಕಳೆದುಕೊಳ್ಳುತ್ತಾನೆಯೇ?
ಎನ್ನುವ ಕಥಾಹಂದರ ಹೊಂದಿದೆ. ಮೊದಲಾರ್ಧ ನಾಯಕನ ಪಾತ್ರದ ಮನಸ್ಥಿತಿಯನ್ನು ಕಟ್ಟಿಕೊಟ್ಟರೆ, ದ್ವಿತೀಯಾರ್ಧ ಕಥೆಯನ್ನು ರೋಚಕ ತಿರುವುಗಳತ್ತ ಕೊಂಡೊಯ್ಯುತ್ತದೆ. ಇಲ್ಲಿನ ಎಲ್ಲಾ ನಟ-ನಟಿಯರು ಅಭಿನಯ ಕೂಡ ಬಹಳ ಚೆನ್ನಾಗಿ ಮಾಡಿದ್ದಾರೆ. ಅದರಲ್ಲೂ ನಾಯಕನ ಪಾತ್ರಧಾರಿ, ಮಾನಸಿಕವಾಗಿ ತೊಳಲಾಡುವ ಯುವಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪ್ರವೀರ್ ಶೆಟ್ಟಿ. ಪ್ರವೀರ್ ನಾಯಕನಾಗಿ ಮೊದಲಬಾರಿಗೆ ಬಣ್ಣ ಹಚ್ಚಿದ್ದರು ಚನ್ನಾಗಿ ಅಭಿನಯಿಸಿದ್ದಾರೆ.

ನಾಯಕಿಯಾಗಿ ಮನೋ ವೈದ್ಯೆಯಾಗಿ ರಿಷಿಕಾ ನಾಯ್ಕ ತುಂಬಾ ಚನ್ನಾಗಿ ಪಾತ್ರ ನಿರ್ವಹಿಸಿದ್ದಾರೆ. ಹಾಗೂ ತೆರೆಯ ಮೇಲೆ ಚನ್ನಾಗಿ ಕಾಣುತ್ತಾರೆ.
ಶೈನ್ ಶೆಟ್ಟಿ ಖಳನಟನಾಗಿ ಮತ್ತು ನಿದ್ರಾದೇವಿ ಆ್ಯಪ್ ಸಂಸ್ಥೆಯ ಮಾಲೀಕನಾಗಿ ನಾಯಕನನ್ನು ಕಾಣುವ ಪಾತ್ರದಲ್ಲಿ ಚನ್ನಾಗಿ ನಟಿಸಿದ್ದಾರೆ.
ಸುಧಾರಾಣಿ ನಾಯಕನ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕೊನೆಯ ಮಾತು:
‘ನಿದ್ರಾದೇವಿ ನೆಕ್ಸ್ಟ್ ಡೋರ್’ ಒಂದು ಹೊಸತನಕ್ಕೆ ತೆರೆದುಕೊಳ್ಳುವ ಸಿನಿಮಾ. ಇದರ ಕಥೆ, ನಿರೂಪಣೆ ಮತ್ತು ತಾಂತ್ರಿಕ ಅಂಶಗಳು ಸಿನಿಮಾ ಪ್ರಿಯರಿಗೆ ಒಂದು ಹೊಸ ಅನುಭವ ನೀಡುತ್ತವೆ. ಆದರೆ, ಸ್ನೇಹಿತನ ಕ್ಷಮೆ, ಮನಃಶಾಸ್ತ್ರಜ್ಞರ ಪ್ರಯತ್ನ, ಮತ್ತು ಪ್ರೇಯಸಿಯ ಪ್ರೀತಿ – ಇವೆಲ್ಲವೂ ಸೇರಿ ನಾಯಕನನ್ನು ಅವನ ಭ್ರಮೆಯಿಂದ ಹೊರಗೆ ಕರೆತರಲು ಸಾಧ್ಯವಾಗುತ್ತದೆಯೇ? ಅಥವಾ ಅವನ ಬದುಕು ಸಂಪೂರ್ಣ ದುರಂತದಲ್ಲಿ ಅಂತ್ಯಗೊಳ್ಳುತ್ತದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯಲು, ನೀವು ಒಮ್ಮೆ ತಪ್ಪದೇ ಚಿತ್ರಮಂದಿರಕ್ಕೆ ಹೋಗಿ ನೋಡಿ!











