ಚಿತ್ರ ವಿಮರ್ಶೆ – “ನೆನಪುಗಳ ಮಾತು ಮಧುರ” ಪ್ರೇಮ, ಕಾಮ, ರೊಮ್ಯಾನ್ಸ್ ಕಲಿಸುವ ಪಾಠಗಳು
ಚಿತ್ರ – ನೆನಪುಗಳ ಮಾತು ಮಧುರ
ನಿರ್ಮಾಪಕರು – ಸೆವನ್ ರಾಜ್
ನಿರ್ದೇಶನ – ಅಫ್ಜಲ್
ಛಾಯಾಗ್ರಹಣ – ಸ್ವಾಮಿ ಮೈಸೂರು
ಸಂಗೀತ – ರಾಜು ಎಮ್ಮಿಗನೂರು.
Rating -3/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು :- ಅಫ್ಜಲ್, ಸೆವೆನ್ ರಾಜ್, ರಣವೀರ್ ಮುಂತಾದವರು.

ನಾಲ್ಕು ಜನ ಸ್ನೇಹಿತರು ತುಂಬಾ ದಿನಗಳ ನಂತರ ಪಾರ್ಟಿ ಮಾಡಲು ರೆಸಾರ್ಟ್ ಒಂದರಲ್ಲಿ ಸೇರುತ್ತಾರೆ. ಅಲ್ಲಿ ನಾಲ್ವರು ತಮ್ಮ ಬದುಕಿನಲ್ಲಿ ಘಟಿಸಿದ ಕೆಲವು ನೆನಪುಗಳನ್ನು ಒಬ್ಬರಾದ ಮೇಲೆ ಒಬ್ಬರು ಹಂಚಿಕೊಳ್ಳುತ್ತಾರೆ.
ನಾಲ್ಕೂ ಜನರ ಕಥೆ ನಾಲ್ಕು ರೀತಿಯಲ್ಲಿರುತ್ತದೆ. ನಾಲ್ಕು ಕಥೆಗಳು ಕೂಡ ಬೇರೆ ಬೇರೆಯಾಗಿರುವ ಕಾರಣ ಚಿತ್ರ ನೋಡುವ ಪ್ರೇಕ್ಷಕರಿಗೆ ಒಂದೇ ಚಿತ್ರದಲ್ಲಿ ನಾಲ್ಕಾರು ಕಥೆಗಳನ್ನು ನೋಡಿದ ಅನುಭವ ಆಗುತ್ತದೆ. ನಾಲ್ಕೂ ಕಥೆಗಳಲ್ಲೂ ಹೆಣ್ಣು ಮತ್ತು ಗಂಡುಗಳ ಸಂಬಂಧದ ಬಗ್ಗೆ ಬೇರೆ ಬೇರೆ ಆಯಾಮದಲ್ಲಿ ನಿರ್ದೇಶಕ ಅಫ್ಜಲ್ ಕಟ್ಟಿಕೊಟ್ಟಿದ್ದಾರೆ.

ಸಾಲ ಕೊಟ್ಟ ವ್ಯಕ್ತಿಯು ಸಾಲ ಪಡೆದವನ ಪತ್ನಿಯನ್ನೇ ಬಯಸಿದಾಗ ಆತ ಮಾಡುವ ತಂತ್ರಗಾರಿಕೆ ಏನು? ಫುಡ್ ಡೆಲವರಿ ಬಾಯ್ ಒಂಟಿ ಹೆಣ್ಣಿನ ಮನೆಗೆ ಫುಡ್ ಡೆಲವರಿ ಮಾಡಲು ಹೋದಾಗ ಅವಳ ಕಾಮದ ಬಯಕೆಯನ್ನು ತೀರಿಸಿದ ನಂತರ ಅವಳ ಕೊಲೆಯಾಗುತ್ತದೆ ಆ ಕೊಲೆ ಪ್ರಕರಣದಲ್ಲಿ ಸಿಲುಕಬೇಕಾದವನು ಪಾರಾಗಿದ್ದು ಹೇಗೆ?
ಮತ್ತೊಬ್ಬ ತನ್ನನ್ನು ಪ್ರೀತಿಸಿದ ಹುಡುಗಿಯನ್ನು ಸ್ನೇಹಿತನಿಗೆ, ಸ್ನೇಹಿತನ ಪ್ರೇಯಸಿಯನ್ನು ತಾನು ಎಕ್ಸ್ ಚೇಂಜ್ ಮಾಡಿಕೊಂಡು ಅನುಭವಿಸಿದ ನಂತರ ಕಾಡುವ ಅವರುಗಳಲ್ಲಿನ ನೆನಪು, ಮತ್ತೊಬ್ಬ ಬೈಕ್ ಕಳ್ಳ ಸತ್ತು ಹೋಗಿರುವ ಹುಡುಗಿಯ ಬೈಕ್ ಕದ್ದು ಆ ಆತ್ಮದೊಂದಿಗೆ ದೇಹ ಸುಖ ಅನುಭವಿಸಿ ಅವಳ ನೆನಪಲ್ಲಿ ಪರಿತಪಿಸುವ ಕಥೆ, ಉಳಿದವರ ಬದುಕಿಗೆ ಸಂಬಂಧಿಸಿದಂತೆ ಮಾಡುವ ಟ್ವಿಸ್ಟ್ ಯಾವುದು ಎನ್ನುವುದೇ ಈ ಚಿತ್ರದ ಆಕರ್ಷಕ ಅಂಶ.
ಮೊದಲ ಬಾರಿ ಆ್ಯಕ್ಷನ್ ಕಟ್ ಹೇಳಿರುವ ಅಫ್ಜಲ್ ಅವರು ಪ್ರಥಮ ಪ್ರಯತ್ನದಲ್ಲೇ ಇನ್ನೂ ಭರವಸೆ ಮೂಡಿಸ ಬಹುದಿತ್ತು. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಪ್ರಮುಖ ಪಾತ್ರವನ್ನು ನಿಭಾಯಿಸಿದ್ದಾರೆ.
ಸ್ವಾಮಿ ಮೈಸೂರು ಛಾಯಾಗ್ರಹಣ, ರಾಜು ಎಮ್ಮಿಗನೂರು ಸಂಗೀತವಿದೆ.
ಅಂಜಲಿ, ಸೌಮ್ಯಾ, ರೇಖಾ ರಮೇಶ್, ಶುಭ ತೀರ್ಥ ಮೊದಲಾದ ನಟಿಯರಿಗೆ ಗ್ಲಾಮರ್ ಜತೆಗೆ ನಟನೆಗೂ ಆದ್ಯತೆ ಇರುವ ಪಾತ್ರಗಳು ಲಭಿಸಿವೆ.
ಚಿತ್ರದ ನಿರ್ಮಾಪಕ ಸೆವೆನ್ ರಾಜ್ ಅವರು ಕುಬೇರಪ್ಪ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರಕ್ಕೂ ಎರಡು ಶೇಡ್ಸ್ ಇವೆ. ಬಡ್ಡಿಗೆ ಹಣ ನೀಡಿ ಹಣ ನೀಡದಿದ್ದರೆ ಅವರ ಹೆಂಡತಿಯರನ್ನು ಕರೆಯುವುದರಿಂದ ಅವರು ಹೇಗೆ ಪರಿವರ್ತನೆಯಾಗುತ್ತಾರೆ, ಕೊನೆಗೆ ಸಮಾಜದಲ್ಲಿ ಹೆಣ್ಣಿನ ಪಾತ್ರ ಏನು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ.











